ನವದೆಹಲಿ, ಆಗಸ್ಟ್ 3: ಮಗಳ ಮದುವೆಗೆ 500 ಕೋಟಿ ರೂಪಾಯಿ ಖರ್ಚು ಮಾಡಿದ ಬಿಜೆಪಿ ನಾಯಕ ಜನಾರ್ದನ ರೆಡ್ಡಿ ವಿರುದ್ಧ ಕೇಂದ್ರ ಸರ್ಕಾರ ಯಾಕೆ ತನಿಖೆಗೆ ವಹಿಸಲಿಲ್ಲಾ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ. ಕರ್ನಾಟಕದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸಗಳು ಹಾಗೂ ಆಪ್ತರ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿಯ ವಿರುದ್ಧ ಟ್ವಿಟ್ಟರ್ ನಲ್ಲಿ ಖಂಡಿಸಿರುವ ಅವರು, ಈ ಬಗ್ಗೆ ಸರಣಿ ಟ್ವೀಟ್ ಮಾಡಿ, ಬಿಜೆಪಿಯ ನಡೆಯನ್ನು ಟೀಕಿಸಿದ್ದಾರೆ. ಈ ವೇಳೆ, ರೆಡ್ಡಿ ವಿಚಾರ ಪ್ರಸ್ತಾಪಿಸಿರುವ ಅವರು, ದೇಶದಲ್ಲಿ ಸಾಮಾನ್ಯ ಜನರು ಹಣವಿಲ್ಲದೆ ಪರದಾಡುತ್ತಿದ್ದಾಗ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾರೀ ಜೋರಾಗಿ ಮದುವೆ ಮಾಡಿದ ರೆಡ್ಡಿಯವರಿಗೆ ಹಣ ಎಲ್ಲಿಂದ ಬಂತು ಎಂದು ಬಿಜೆಪಿ ಪ್ರಶ್ನೆ ಮಾಡಲಿಲ್ಲ ಎಂದಿದ್ದಾರೆ. ತಮ್ಮ ವಿರುದ್ಧ ತನಿಖೆ ನಡೆಸದಂತೆ ಬಿಜೆಪಿಗೆ ರೆಡ್ಡಿ ಎಷ್ಟು ಹಣ ನೀಡಿದರು ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿರುವ ಅವರು, ಗುಜರಾತ್ ನಲ್ಲಿ ಬಿಜೆಪಿಯು ‘ಆಪರೇಷನ್ ಕಮಲ’ ಹೆಸರಿನಲ್ಲಿ ಕುದುರೆ ವ್ಯಾಪಾರದಲ್ಲಿ ತೊಡಗಿತ್ತು. ಇದನ್ನು ತಪ್ಪಿಸಲು ಗುಜರಾತ್ ನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಆ ಎಲ್ಲಾ ಶಾಸಕರ ಆತಿಥ್ಯವನ್ನು ವಹಿಸಿಕೊಂಡಿದ್ದರಿಂದಲೇ ಡಿಕೆ ಶಿವಕುಮಾರ್ ಮೇಲೆ ಇಂಥ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿದೆ ಎಂದು ಪ್ರಿಯಾಂಕ ಕಿಡಿ ಕಾರಿದ್ದಾರೆ. ಅಲ್ಲದೆ, ಈ ಹಿಂದೆಯೇ ಡಿಕೆಶಿ ಅವರು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಅದರಂತೆ, ಅವರ ಆಸ್ತಿ ಮೌಲ್ಯ 251 ಕೋಟಿ ರೂಪಾಯಿಗಳಷ್ಟಿತ್ತು. ಹಾಗಿರುವಾಗ, ಅವರ ಮನೆಯಲ್ಲಿ 10 ಕೋಟಿ ರು. ಸಿಕ್ಕಿದ್ದು ದೊಡ್ಡ ವಿಷಯವೇ? ಇದು ತಮಾಷೆಯಲ್ಲವೇ? ಎಂದು ಅವರು ಗೇಲಿ ಮಾಡಿದ್ದಾರೆ.

ಜೆಟಿವಿ ನ್ಯೂಸ್-