asaa

ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ ಇಂದು
ದೊಡ್ಡಬಳ್ಳಾಪುರ ಗ್ರಾಮಾಂತರ:ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯಸ್ವಾಮಿ ಬ್ರಹ ರಥೋತ್ಸವ ಡಿ.24 ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ.

ಘಾಟಿ ಕ್ಷೇತ್ರದ ಇತಿಹಾಸ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರವು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ದೇವಾಲಯದ ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿ ಸುಬ್ರಹ್ಮಣ್ಯಸ್ವಾಮಿ ಹಾಗೂ ನರಸಿಂಹಸ್ವಾಮಿ ಮೂರ್ತಿಗಳಿರುವುದು ಇಲ್ಲಿನ ವಿಶೇಷ. ದೇವಾಲಯದ ರಾಜಗೋಪುರ, ವಿಮಾನಗೋಪುರ. ನಾಗರಕಟ್ಟೆಗಳು, ಕ್ಷೇತ್ರದಲ್ಲಿರುವ ಕುಮಾರಧಾರ ಪುಷ್ಕರಣಿ, ಬನ್ನಿಮಂಟಪ, ಧರ್ಮ ಛತ್ರಗಳು ಭಕ್ತರ ಗಮನ ಸೆಳೆಯುತ್ತವೆ.

ಘಾಟಿ ಸುಬ್ರಮಣ್ಯ ದೇವಾಲಯದ ಗರ್ಭಗುಡಿಯಲ್ಲಿರುವ ಸುಬ್ರಮಣ್ಯಸ್ವಾಮಿ ಮತ್ತು ನರಸಿಂಹಸ್ವಾಮಿ ಏಕಶಿಲೆಯಲ್ಲಿರುವ ಬಹು ಅಪರೂಪದ ದೃಶ್ಯವು ಘಾಟಿ ಕ್ಷೇತ್ರಕ್ಕೆ ಪೌರಾಣಿಕ ಹಿನ್ನಲೆಯ ಮಹತ್ವವನ್ನು ನೀಡಿದೆ. ತಾರಕಾಸುರ ಸಂಹಾರಕ್ಕಾಗಿ ಘೋರ ತಪಸ್ಸು ಮಾಡಿದ ಸುಬ್ರಮಣ್ಯಸ್ವಾಮಿ ನಂತರ ಸರ್ಪ ರೂಪವನ್ನು ತಾಳಿ, ಕೊನೆಗೆ ನಿಜರೂಪ ಪಡೆಯಲು ನರಸಿಂಹಸ್ವಾಮಿಯನ್ನು ಆಲಂಗಿಸಿ ಇಬ್ಬರೂ ಈ ಕ್ಷೇತ್ರದಲ್ಲಿಯೇ ನೆಲಸಿದ್ದಾರೆ ಎಂದು ಸ್ಥಳ ಪುರಾಣದಿಂದ ತಿಳಿದು ಬರುತ್ತದೆ. ಸುಬ್ರಮಣ್ಯಸ್ವಾಮಿಗೆ ಸರ್ಪರೂಪದಿಂದ ನಿಜರೂಪ ಪ್ರಾಪ್ತಿಯಾಗಲು ಪಾರ್ವತಿ ಷಷ್ಠಿ ವ್ರತವನ್ನು ಕೈಗೊಂಡ ಹಿನ್ನಲೆಯಲ್ಲಿ ಷಷ್ಠಿ ದಿನದಂದು ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಯ ನಂತರ ಬರುವ ಕುಮಾರ ಷಷ್ಠಿಯ ದಿನದಂದೂ ಸಹ ಕ್ಷೇತ್ರದಲ್ಲಿ ವಿಶೇಷ ಪೂಜಾ ಕಾರ‍್ಯಕ್ರಮಗಳು ನಡೆಯುತ್ತವೆ.

ಘಾಟಿ ಸುಬ್ರಮಣ್ಯ ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾಗಿರುವ ಘಾಟಿ ಸುಬ್ರಹ್ಮಣ್ಯ ದೇವಾಲಯವನ್ನು ಸಂಡೂರಿನ ಘೋರ್ಪಡೆ ವಂಶದ ಅರಸರು ನಿರ್ಮಿಸಿದರು. ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ದೇವಾಲಯದ ಮುಂಭಾಗ ಮುಖ ದ್ವಾರವನ್ನು ನಿರ್ಮಿಸಿಕೊಟ್ಟಿದ್ದಾರೆ. ಕುಮಾರಧಾರ ಪುಷ್ಕರಣಿಯು ಘೋರ್ಪಡೆ ಅರಸರು ನಿರ್ಮಿಸಿದ್ದಾರೆ. ಘಾಟಿ ಸುಬ್ರಹ್ಮಣ್ಯ ಸುಂದರ ಪ್ರಕೃತಿ ಸೌಂದರ‍್ಯದ ನಡುವೆ ವ್ಯರ್ಥವಾಗಿ ಹರಿದು ಹೊಗುತ್ತಿದ್ದ ನೀರನ್ನು ಕಂಡ ಸರ್‌.ಎಂ.ವಿಶ್ವೇಶ್ವರಯ್ಯನವರು 1917ರಲ್ಲಿ ವಿಶ್ವೇಶ್ವರಯ್ಯ ಪಿಕಪ್‌ ಡ್ಯಾಂ ನಿರ್ಮಿಸಿದರು.

Please follow and like us:
0